Thursday, 30 January 2014

ಸ್ತೋತ್ರ ಮಂದಾರ

     ಗೋ ಮಾತಾ ಸ್ತುತಿ ಸ್ತೋತ್ರಗಳು
    **********************
           - ೧ -
    || ಗೋ ಸೂಕ್ತಮ್ ||
    **************
         ||ಓಂ||
ಆಗಾವೋ ಅಗ್ಮನ್ನುತ ಭದ್ರಮಕ್ರನ್ನ್ 
ಸೀದಂತು ಗೋಷ್ಠೇ ರಣಯಂತ್ವಸ್ಮೇ |
ಪ್ರಜಾವತೀ: ಪುರುರೂಪಾ ಇಹ ಸ್ಯು:
ಇಂದ್ರಾಯ ಪೂರ್ವೀರುಷಸೋ ದುಹಾನಾ:  ||೧||

ಭಾವಾರ್ಥ:-ಗೋವುಗಳು ನಮ್ಮ ನಿಲಯಕ್ಕೆ ಆಗಮಿಸಲಿ.ನಮಗೆ ಶುಭವನ್ನು ಕರುಣಿಸಲಿ.ನಮ್ಮ ಹಟ್ಟಿಯಲ್ಲಿ ಮಲಗಲಿ.  ನಮ್ಮ ಬಗೆಗೆ ಪ್ರೀತಿಯನ್ನು ಹೊಂದಲಿ. ನಾನಾ ಬಣ್ಣದ ಉತ್ತಮ ಕರುಗಳನ್ನು ಹೊಂದಿರುವ ಬಹು ಸಂಖ್ಯೆಯ ಹಸುಗಳು  ಉದಯಕಾಲದಲ್ಲಿ ದೇವರಿಗಾಗಿ ಹಾಲನ್ನು ಕೊಡಲಿ.

ಇಂದ್ರೋ ಯಜ್ವನೇ ಪೃಣತೇ ಚ ಶಿಕ್ಷತಿ 
ಉಪೇದ್ದದಾತಿ ನ ಸ್ವಂಮುಷಾಯತಿ |
ಭೂಯೋ ಭೂಯೋ ರಯಿಮಿದಸ್ಯ ವರ್ಧಯನ್ನ್
ಅಭಿನ್ನೇ ಖಿಲ್ಲೇ ನಿದದಾತಿ ದೇವಯುಮ್ ||೨||

ಭಾವಾರ್ಥ:- ಯಾಗವನ್ನು ಮಾಡುವ ಹಾಗೂ ಸ್ತುತಿಯನ್ನು ಮಾಡುವ ಯಜಮಾನನಿಗೆ ಇಂದ್ರನು ಅಪೇಕ್ಷೆಪಟ್ಟ ಸಂಪತ್ತನ್ನು  ದಯಪಾಲಿಸುವನು. ತಾನೇ ಯಜಮಾನನ ಹತ್ತಿರಕ್ಕೆ ಆಗಮಿಸಿ ನೀಡುತ್ತಾನೆ. ಕೊಟ್ಟ ಸಂಪದವನ್ನು ಮತ್ತೆ ಪುನ:  ಕಿತ್ತುಕೊಳ್ಳುವುದಿಲ್ಲ.ಬದಲಾಗಿ ಸಂಪತ್ತನ್ನು ಮತ್ತೆ ಮತ್ತೆ ಇನ್ನಷ್ಟು ವೃದ್ಧಿಸುವಂತೆ ಕರುಣಿಸುತ್ತಾನೆ.ಆತನು  ದೇವರನ್ನು ಅರ್ಚಿಸುವಾತನನ್ನು ಶತ್ರುಗಳಿಗೆ ಭೇಧಿಸಲು ಅಸಾಧ್ಯವಾಗಿರುವ ಸುರಕ್ಷಿತ ಜಾಗದಲ್ಲಿರಿಸುವನು.

ನ ತಾ ನಶಂತಿ ನದಭಾತಿ ತಸ್ಕರ:
ನೈನಾ ಅಮಿತ್ರೋ ವ್ಯಥಿರಾದಧರ್ಷತಿ |
ದೇವಾಶ್ಚ ಯಾಭಿರ್ಯಜತೇ ದದಾತಿ ಚ
ಜೋಗಿತ್ತಾಭಿ: ಸಚತೇ ಗೋಪತಿಸ್ವಹ  ||೩||

ಭಾವಾರ್ಥ:-ನಮ್ಮ ಗೋವುಗಳು ಅವಿನಾಶಿಯಾಗಿರಲಿ. ಅವುಗಳನ್ನು ಕಳ್ಳರು ಅಪಹರಿಸದಿರಲಿ. ವೈರಿಗಳ ಶಸ್ತ್ರ ಗೋವುಗಳಿಗೆ  ಹಾನಿಯುಂಟು ಮಾಡದಿರಲಿ. ಗೋವುಗಳ ಸಹಕಾರದಿಂದ ದೇವ ಯಜ್ಞವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಸಮರ್ಪಿಸುವ  ಗೋವುಗಳ ಒಡೆಯನು ಚಿರಕಾಲ ಸುಖವಾಗಿ ಬಾಳಲಿ.

ನ ತಾ ಅರ್ವಾರೇಣುಕಕಾಟೋ ಅಶ್ನುತೇ
ನಸಗ್ಗ್ಂಸ್ಕೃತತ್ರಮುಪಯಂತಿ ತಾ ಅಭಿ |
ಉರುಗಾಯಮಭಯಂ ತಸ್ಯ ತಾ ಅನು
ಗವೋ ಮರ್ತ್ಯಸ್ಯ ವಿಚರಂತಿ ಯಜ್ವನ:  ||೪||

ಭಾವಾರ್ಥ:-ಮಣ್ಣಿನಹುಡಿಯನ್ನು ಎಬ್ಬಿಸುತ್ತಾ ಕುದುರೆಗಳು ಗೋವುಗಳತ್ತ ಮುನ್ನುಗ್ಗಿ ಬರದಿರಲಿ. ಗೋವುಗಳು  ಯಜ್ಞಪಶುಗಳಾಗಿ ಕತ್ತರಿಸುವಿಕೆಗೆ ಒಳಗಾಗದಿರಲಿ.ಯಜಮಾನನ  ವಿಸ್ತಾರವಾಗಿರುವ ಹುಲ್ಲುಗಾವಲಿನಲ್ಲಿ ನಿರ್ಭಯವಾಗಿ ಗೋವುಗಳು ಸ್ವತಂತ್ರವಾಗಿ ಸಂಚರಿಸಲಿ.

ಗಾವೋ ಭಗೋ ಗಾವ ಇಂದ್ರೋ ಮೇ ಅಚ್ಛಾತ್ 
ಗಾವಸ್ಸೋಮಸ್ಯ ಪ್ರಥಮಸ್ಯ ಭಕ್ಷ್ಯ: |
ಇಮಾ ಯಾ ಗಾವ: ಸ ಜನಾ ಸ ಇಂದ್ರ:
ಇಚ್ಛಾಮೀದ್ಧೃದಾ ಮನಸಾ ಚಿದಿಂದ್ರಮ್  ||೫||

ಭಾವಾರ್ಥ:-ಗೋವುಗಳು ಸಂಪತ್ತಿನ ಪ್ರತೀಕವಾಗಿವೆ. ಇಂದ್ರನು ನಮಗೆ ಗೋವುಗಳನ್ನು ಕರುಣಿಸಲಿ. ಮೊದಲು  ಅರ್ಪಿತವಾಗುವಂತಹಾ ಸೋಮಕ್ಕೆ ಹಸುಗಳು ಕ್ಷೀರಾದಿ ದ್ರವ್ಯಗಳನ್ನು ಒದಗಿಸಿಕೊಡಲಿ. ಮಾನವುಳ್ಳವರಾಗಿರುವ ಮಾನವರೇ!  ಗೋವುಗಳು ಇಂದ್ರನ ಪ್ರತೀಕವಾಗಿವೆ. ಹಾಗಾಗಿ ಇಂತಹಾ ಇಂದ್ರನನ್ನು ಮನಸಾ ಬೇಡಿಕೊಳ್ಳುವೆನು. 

ಯೂಯಂ ಗಾವೋ ಮೇದಯಥಾ ಕೃಶಂಚಿತ್
ಅಶ್ಲೀಲಂ ಚಿಕೃಣುಥಾ ಸುಪ್ರತೀಕಮ್ |
ಭದ್ರಂ ಗೃಹಂ ಕೃಣುಥ ಭದ್ರವಾಚ:
ಬೃಹದ್ವೋ ವಯ ಉಚ್ಯತೇ ಸಭಾಸು  ||೬||

ಭಾವಾರ್ಥ:-ಗೋವುಗಳೇ!ನೀವು ನಮಗೆ ಸಂತಸವನ್ನುಂಟು ಮಾಡಿರಿ. ಕೆಟ್ಟ ಲಕ್ಷಣದ ಹಾಗೂ ಸೊರಗಿರುವ ನಮ್ಮ  ಅಂಗಾಂಗಗಳನ್ನು ಲಕ್ಷಣವಾಗಿರುವಂತೆ ಅನುಗ್ರಹಿಸಿರಿ. ಮಂಗಲಮಯವಾಗಿರುವ ಧ್ವನಿಯುಳ್ಳ ಗೋವುಗಳೇ! ನಮ್ಮ  ನಿಲಯದಲ್ಲಿ ಮಂಗಲವು ಸ್ಥಿರವಾಗಿರುವಂತೆ ಅನುಗ್ರಹಿಸಿರಿ.ನಿಮಗೆ ಯಜ್ಞಯಾಗಾದಿಗಳಲ್ಲಿ ಅಧಿಕ ಅನ್ನವನ್ನು  ಸಮರ್ಪಿಸುವೆವು.

ಪ್ರಜಾವತೀ: ಸೂರ್ಯವಸ ರಿಶಂತೀ:
ಶುದ್ಧಾ ಅಪ: ಸುಪ್ರಪಾಣೇ ಪಿಬಂತೀ: |
ಮವಸ್ತೇನ ಈಶತ ಮಾಸ್ಘಶಸ 
ಪರಿವೋ ಹೇತೀ ರುದ್ರಸ್ಯ ವೃಂಜ್ಯಾತ್  ||೭||

ಭಾವಾರ್ಥ:-ಗೋವುಗಳೇ! ನೀವು ಕರುಗಳನ್ನು ಹೊಂದಿದವರಾಗಿ ಉತ್ತಮ ಹುಲ್ಲನ್ನು ಮೆಲ್ಲುತ್ತಾ ಇರಿ.ಶುದ್ಧ ನೀರಿರುವ  ಕೊಳದಲ್ಲಿ ಸುಖವಾಗಿ ನೀರನ್ನು ಕುಡಿಯಿರಿ. ಕಳ್ಳರು ಎಂದಿಗೂ ನಿಮ್ಮ ಒಡೆಯರಾಗದಿರಲಿ. ವ್ಯಾಘ್ರರೂಪಿಗಳು  ನಿಮಗೆಂದೂ ಕೇಡನ್ನು ಬಗೆಯದಿರಲಿ.ರುದ್ರನ ಆಯುಧವು ನಿಮಗೆ ಕೇಡನ್ನು ಉಂಟು ಮಾಡದಿರಲಿ.

ಉಪೇದ ಮುಪ ಪರ್ಚನಮ್
ಅಸು ಗೋಷೂಪ ಪೃಚ್ಯತಾಮ್
ಉಪ ಋಷಭಸ್ಯ ರೇತಸಿ
ಉಪೇಂದ್ರ ತವ ವೀರ‍್ಯೇ  ||೮||

ಭಾವಾರ್ಥ:-ಗೋವುಗಳಲ್ಲಿ ಈ ರೀತಿಯ ಪರಿಪೂರ್ಣತೆ ತುಂಬಿರಲೆಂಬುದು ಪ್ರಾರ್ಥನೆಯಾಗಿರಲಿ. ಇಂದ್ರನೇ! ನಿನ್ನ ಶಕ್ತಿಯ  ಮೇಲ್ಮೆಗಾಗಿ ವೃಷಭದ ವೀರ್ಯದಲ್ಲಿ ಸಾಮರ್ಥ್ಯವು ತುಂಬಿರಲಿ.

*********************************************************************************
        || ಇತಿ ಗೋ ಸೂಕ್ತಮ್ ||   || ಈ ರೀತಿಯಾಗಿ ಗೋ ಸೂಕ್ತಗಳ ಭಾವಾರ್ಥವು ||
*********************************************************************************
                                   -೨ -
 || ಗೋ ಮಾತಾ ಸ್ತೋತ್ರಮ್ ||
  ********************
ಪೃಷ್ಟೇ ಬ್ರಹ್ಮಾ ಕಂಠೇ ವಿಷ್ಣು: ಮುಖೇ ರುದ್ರ: ಪ್ರತಿಷ್ಠಿತ: |
ಮಧ್ಯೇ ದೇವಗಣಾ: ಸರ್ವೇ ರೋಮಕೂಪೇ ಮಹರ್ಷಯ: ||೧||

ಭಾವಾರ್ಥ:-ಗೋವುಗಳ ಬೆನ್ನಿನಲ್ಲಿ ಬ್ರಹ್ಮನೂ, ಕುತ್ತಿಗೆಯಲ್ಲಿ ವಿಷ್ಣುವೂ, ಮೊಗದಲ್ಲಿ ಮಹೇಶ್ವರನೂ ಪ್ರತಿಷ್ಠಾಪನೆಯಾಗಿದ್ದಾರೆ. ಮಧ್ಯದಲ್ಲಿ ಸಮಸ್ತ ದೇವಾನು ದೇವತೆಗಳೂ, ರೋಮಕೂಪದಲ್ಲಿ ಮಹರ್ಷಿಗಳೂ ನೆಲೆಯಾಗಿದ್ದಾರೆ.

ನಾಗಾ: ಪುಚ್ಛೇ ಖರಾಗ್ರೇಷು ಯೇಚಾಷ್ಟೌ ಕುಲಪರ್ವತಾ: | 
ಮೂತ್ರೇ ಗಂಗಾದಯೋ ನದ್ಯ: ನೇತ್ರಯೋ: ಶಶಿಭಾಸ್ಕರೌ ||೨||

ಭಾವಾರ್ಥ:-ಗೋವುಗಳ ಬಾಲದಲ್ಲಿ ನಾಗದೇವತೆಗಳೂ, ಗೊರಸುಗಳ ತುದಿಯಲ್ಲಿ ಅಷ್ಟ ಕುಲಪರ್ವತಗಳೂ, ಮೂತ್ರದಲ್ಲಿ ಗಂಗಾದಿ ಪವಿತ್ರ ನದಿಗಳೂ, ಕಣ್ಣುಗಳಲ್ಲಿ ರವಿಚಂದ್ರರೂ ನೆಲೆಸಿರುತ್ತಾರೆ.

ಕರ್ಣಯೋರಶ್ವಿನೌ ವಾಯು: ಘ್ರಾಣೇ ಲಕ್ಷ್ಮೀಶ್ಚ ಗೋಮಯೇ |
ಯಸ್ಯಾ ಸ್ತನೇಷು ವೇದಾ: ಸ್ಯು: ಸಾ ಧೇನುರ್ವರದಾಸ್ತುಮೇ ||೩||

ಭಾವಾರ್ಥ:-ಹಸುಗಳ ಕಿವಿಗಳಲ್ಲಿ ಅಶ್ವಿನಿ ದೇವತೆಗಳೂ, ಮೂಗಿನಲ್ಲಿ ವಾಯು ದೇವತೆಯೂ, ಸೆಗಣಿಯಲ್ಲಿ ಲಕ್ಷ್ಮಿಯೂ, ಕೆಚ್ಚಲಿನಲ್ಲಿ ಚತುರ್ವೇದಗಳೂ ವಾಸವಾಗಿದ್ದು ಅಂತಹಾ ಕಾಮಧೇನುವು ನನಗೆ ವರವನ್ನು ಕರುಣಿಸಲಿ.

ಸರ್ವದೇವ ಮಯೇ ದೇವಿ ಸರ್ವದೇವೈರಲಂಕೃತೇ |
ಮತರ್ಮಮಾಭಿಲಷಿತಂ ಸಫಲಂ ಕುರು ನಂದಿನಿ ||೪||

ಭಾವಾರ್ಥ:- ಈ ರೀತಿಯಾಗಿ ಸರ್ವದೇವಮಯಿಯಾಗಿರುವ ದೇವಿಯೇ; ಎಲ್ಲಾ ದೇವತೆಗಳಿಂದ ನೀನು ಅಲಂಕರಿಸಲ್ಪಟ್ಟವಳಾಗಿರುವೆ. ಗೋಮಾತೆಯೇ! ನನ್ನ ಅಭಿಲಾಷೆಗಳನ್ನು ಈಡೇರಿಸು.

ಗಾವೋ ಮಮಾಗ್ರತ: ಸಂತು ಗಾವೋ ಮೇ ಸಂತು ಪಾರ್ಶ್ವತ: |
ಗಾವೋ ಮೇ ಪೃಷ್ಠತ: ಸಂತು ಗವಾಂ ಮಧ್ಯೇ ವಸಾಮ್ಯಹಮ್ ||೩||

ಭಾವಾರ್ಥ:-ಹಸುಗಳು ನನ್ನ ಮುಂದೆ ಹಾಗೂ ಪಕ್ಕದಲ್ಲಿ ಮತ್ತು ಹಿಂಬದಿಯಲ್ಲಿ ಇರಲಿ. ಆರೀತಿಯಾಗಿರುವ ಹಸುಗಳ ಮಧ್ಯೆ ನನ್ನ ವಾಸವಾಗಿರಲಿ.

ಗಾಂ ದೃಷ್ಟ್ವಾ ಚ ನಮಸ್ಕೃತ್ವಾ ಚೈವ ಪ್ರದಕ್ಷಿಣಾಮ್ |
ಪ್ರದಕ್ಷಣೀಕೃತಾ ತೇನ ಸಪ್ತ ದ್ವೀಪಾ ವಸುಂಧರಾ ||೬||

ಭಾವಾರ್ಥ:-ಹಸುಗಳನ್ನು ಕಾಣುತ್ತಾ ನಮಸ್ಕರಿಸುತ್ತಾ ಪ್ರದಕ್ಷಿಣೆ ಮಾಡಿದರೆ ಸಮಸ್ತ ಬ್ರಹ್ಮಾಂಡವನ್ನು ಸುತ್ತಿದ ಫಲವು ಲಭಿಸುತ್ತದೆ.

ಸರ್ವ ಕಾಮದುಘೇ ದೇವಿ ಸರ್ವ ತೀರ್ಥಾಭಿಷೇಚನೀ |
ಪಾವನೀ ಸುರಭಿ: ಶ್ರೇಷ್ಠೇ ದೇವಿ ತುಭ್ಯಂ ನಮೋಸ್ತುತೇ ||೭||

ಭಾವಾರ್ಥ:-ಸಮಸ್ತ ಇಷ್ಟಾರ್ಥಗಳನ್ನು ಕರುಣಿಸುವ, ಸರ್ವತೀರ್ಥಸ್ನಾನದ ಫಲದೊರಕಿಸುವ, ಪಾವನೆಯಾಗಿರುವ ಸುರಭಿ ದೇವಿಯೇ ನಿನಗೆ ನನ್ನ ನಮಸ್ಕಾರಗಳು. 

ಸುರಭಿರ್ವೈಷ್ಣವೀ ಮಾತಾ ಸುರಲೋಕೇ ಪ್ರತಿಷ್ಠಿತಾ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗ್ರಹ್ಯತಾಮ್ ||೮||

ಭಾವಾರ್ಥ:- ತಾಯಿ ವೈಷ್ಣವಿಯಾಗಿರುವ ಕಾಮಧೇನುವು ಸುರಲೋಕದಲ್ಲಿ ವಾಸವಾಗಿರುವಳು. ಗೋಮಾತೆ ಕಾಮಧೇನುವೇ! ನಾನು ಕೊಡುತ್ತಿರುವ ಒಂದು ಹಿಡಿ ಆಹಾರವನ್ನು ಸ್ವೀಕರಿಸು ತಾಯೇ. 
*********************************************************************************
|| ಇತಿ ಗೋ ಮಾತಾ ಸ್ತೋತ್ರಮ್ ||  ||ಇದು ಗೋಮಾತಾ ಸ್ತೋತ್ರಗಳ ಭಾವಾರ್ಥವು ||
*********************************************************************************

No comments:

Post a Comment