ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು.
******************
- ೧-
|| ಶ್ರೀ ಸುಬ್ರಹ್ಮಣ್ಯ ಧ್ಯಾನ ಶ್ಲೋಕಾ: ||
*******************************
ಶರಣ್ಯಂ ಸರ್ವ ಲೋಕಾನಾಂ ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ: ಸುಬ್ರಮಣ್ಯಮುಪಾಸ್ಮಹೇ ||೧||
ಭಾವಾರ್ಥ:- ಸಮಸ್ತ ಲೋಕಕ್ಕೂ ಆಶ್ರಯದಾತನೂ, ದೇವತೆಗಳಲ್ಲಿ ಅಗ್ರಗಣ್ಯನೂ, ದೇವತೆಗಳ ಸೇನಾಧಿಪನೂ,ಆಗಿರುವ ಸುಬ್ರಮಣ್ಯನನ್ನು ಧ್ಯಾನಿಸೋಣಾ.
ಲೋಕೈಕ ವೀರಂ ದ್ವಿರದಾಸ್ಯಸೋದರಂ
ತ್ರಿನೇತ್ರಪುತ್ರಂ ಚತುರಾಸ್ಯವಂದಿತಮ್ |
ಪಂಚಾಸ್ಯತುಲ್ಯ-ಪ್ರಚುರ-ಪ್ರತಾಪಂ
ಷಡಾನನಂ ಸಪ್ತ ಜಗನ್ನುತಂ ನಮ: ||೨||
ಭಾವಾರ್ಥ:-ಲೋಕದ ಏಕಮಾತ್ರ ವೀರನೂ, ಎರಡು ದಾಡೆಯನ್ನು ಹೊಂದಿರ್ಪ ಗಜಾನನನ ಸೋದರನೂ, ಮುಕ್ಕಣ್ಣನ ಪುತ್ರನೂ ಆದ, ಚತುರ್ಮುಖ ಬ್ರಹ್ಮನಿಂದ ನಮಸ್ಕರಿಸಲ್ಪಡುವವನಾದ, ಸಿಂಹದಂತೆ ಬಹು ಪ್ರತಾಪಿಯೂ, ಆರು ಮುಖವುಳ್ಳವನೂ, ಸಪ್ತಲೋಕಗಳಿಂದಲೂ ವಂದಿಸಲ್ಪಡುವವನೂ ಆದ ಸುಬ್ರಮಣ್ಯನನ್ನು ಸ್ತುತಿಸೋಣಾ.
ಪದ್ಮಸವ್ಯ ಕಟಿ ಸಂಯುತವಾಮಂ
ಪದ್ಮಕಾಂತಿನಿಭಮೇಕಮುಖಂಚ |
ಬಾಲವೃದ್ಧಿಕರಮೀಶ್ವರಸೂನುಂ
ಬಾಲಮುನ್ನತಭುಜಂ ಪ್ರಣತೋಸ್ಸ್ಮಿ ||೩|| [ಕುಮಾರತಂತ್ರ]
ಭಾವಾರ್ಥ:-ಬಲಗೈಯಲ್ಲಿಕಮಲದ ಪುಷ್ಪವನ್ನು ಹಿಡಿದು, ಎಡಗೈಯನ್ನು ಸೊಂಟದ ಮೇಲಿರಿಸಿ, ತಾವರೆಯ ವರ್ಣದವನಾಗಿ,ಉನ್ನತವಾದ ಭುಜವನ್ನು ಹೊಂದಿರುವ ಈಶ್ವರನ ಮಗನಾದ, ಬಾಲಕರಿಗೆ ಉನ್ನತಿಯನ್ನು ಕರುಣಿಸುವ ಬಾಲಸುಬ್ರಹ್ಮಣ್ಯನಿಗೆ ನಾನು ನಮಸ್ಕರಿಸುವೆ.
ಷಡಾನನಂ ಕುಂಕುಮರಕ್ತ ವರ್ಣಂ
ಮಹಾಮತಿಂ ದಿವ್ಯ ಮಯೂರವಾಹಮ್ |
ರುದ್ರಸ್ಯಸೂನುಂ ಸುರಸೈನ್ಯನಾಥಂ
ಗುಹಂ ಸದಾ ಶರಣಮಹಂ ಪ್ರಪದ್ಯೇ ||೪||
ಭಾವಾರ್ಥ:-ಆರು ಮುಖಗಳಿಂದ ಕೂಡಿದವನಾಗಿ, ಕುಂಕುಮವನ್ನು ಹೋಲುವ ವರ್ಣದವನಾಗಿ, ಜ್ಞಾನಿಯಾಗಿ, ದಿವ್ಯವಾದ ಮಯೂರವನ್ನು ವಾಹನವನ್ನಾಗಿ ಹೊಂದಿರುವ ಶಿವತನಯನಾದ, ದೇವತೆಗಳ ಸೇನಾಧಿಪನಾದ ಗುಹನಿಗೆ ಸದಾ ನಾನು ಶರಣಾಗುವೆ.
ಕರಧ್ರುತ ನವನಾಗಂ ಕಲ್ಪಿತಾಶೇಷಭೂಷಂ
ವರಮಪಿ ಕಟಿಭಾಗೇನ್ಯಸ್ತ ಹಸ್ತಾಂಭುಜೈಕಮ್ |
ಅರುಣಕಿರಣಶೋಭಂ ತಾರಕ ಧ್ವಂಸಿನಾಥಂ
ಶರವಣಭವಮೀಡೇ ಶಾಂಕರಂ ಸ್ಕಂದಮೀಶಮ್ ||೫||
ಭಾವಾರ್ಥ:-ಹಸ್ತದಲ್ಲಿ ಹಾವಿನ ಮರಿ ಅಥವಾ ಮೊಟ್ಟೆಯನ್ನು ಧರಿಸಿ, ಸರ್ವಾಭರಣ ಭೂಷಿತನಾಗಿ, ಮತ್ತೊಂದು ಹಸ್ತವನ್ನು ಸೊಂಟದ ಮೇಲಿರಿಸಿದ, ಕೆಂಪಾದ ಕಾಂತಿಯಿಂದ ಬೆಳಗುತ್ತಿರುವ, ತಾರಕಾಸುರನನ್ನು ಹರಣಗೈದ, ಆನೆಹುಲ್ಲಿನ ಕಾಡಿನಲ್ಲಿ ಜನಿಸಿದ, ಶಂಕರನ ಮಗನಾಗಿರುವ ದೊರೆ ಸ್ಕಂದನನ್ನು ಸ್ತುತಿಸುತ್ತೇನೆ.
ಸ್ಫುರನ್ ಮಕುಟ-ಪತ್ರಕುಂಡಲ ವಿಭೂಷಿತಂ ಚಂಪಕ-
ಸ್ರಜಾ ಕಲಿತ ಕಂಧರಂ ಕರಯುಗೇನ ಶಕ್ತಿಂ ಪವಿಮ್ |
ದಧಾನಮಥವಾ ಕಟೀಕಲಿತ ವಾಮಹಸ್ತೇಷ್ಟದಂ
ಗುಹಂ ಘುಸೃಣಭಾಸುರಂ ಸ್ಮರತಪೀತ ವಾಸೋವಸಮ್ ||೬|| [ತಂತ್ರ ಸಮುಚ್ಚಯ]
ಭಾವಾರ್ಥ:-ಹೊಳೆಯುವ ಕಿರೀಟ ಹಾಗೂ ಪತ್ರಕುಂಡಲಗಳಿಂದ ಅಲಂಕರಿಸಲ್ಪಟ್ಟವನಾಗಿ, ಕೊರಳಲ್ಲಿ ಸಂಪಿಗೆಯಮಾಲೆಯನ್ನು ಧರಿಸಿ,ತನ್ನೆರಡು ಹಸ್ತಗಳಲ್ಲಿ ಶಕ್ತಿ ಹಾಗೂ ವಜ್ರಾಯುಧವನ್ನು ಧರಿಸಿ, ಒಂದು ಹಸ್ತವನ್ನು ಸೊಂಟದ ಮೇಲಿರಿಸಿಕೊಂಡು, ಮತ್ತೊಂದು ಹಸ್ತದ ಮೂಲಕ ವರದ ಮುದ್ರೆಯನ್ನು ತೋರುವ, ಕುಂಕುಮದ ವರ್ಣದ ದೇಹ ಕಾಂತಿ ಹಾಗೂ ಅರಸಿನ ವಸನಧಾರಿಯಾದ ಗುಹನನ್ನು ಸ್ಮರಿಸೋಣಾ.
ಸುಬ್ರಹ್ಮಣ್ಯಸ್ಯ ಮಾಹಾತ್ಮ್ಯಂ ವರ್ಣಿತುಂ ಕೇನ ಶಕ್ಯತೇ? |
ಯತ್ರೋಚ್ಛಿಷ್ಟಮಪಿ ಸ್ಪ್ರುಷ್ಟಂ ಶ್ವಿತ್ರಿಣ: ಶೋಧಯತ್ಯಹೋ! ||೭|| [ತೀರ್ಥ ಪ್ರಬಂಧ]
ಭಾವಾರ್ಥ:-ಸುಬ್ರಹ್ಮಣ್ಯ ದೇಗುಲದಲ್ಲಿ ಎಂಜಲು ಅನ್ನವೇ ಕುಷ್ಠದಂತಹಾ ಭೀಕರ ಚರ್ಮವ್ಯಾಧಿಯಿಂದ ಪೀಡಿತರಾದವರನ್ನು ಗುಣಪಡಿಸುತ್ತಿರುವಾಗ ಆ ಷಣ್ಮುಖ ಸ್ವಾಮಿಯ ಮಹಿಮೆಯನ್ನು ಎಂತು ವರ್ಣಿಸಲು ಸಾಧ್ಯ?
********************************************************************************* || ಇತಿ ಶ್ರೀ ಸುಬ್ರಮಣ್ಯ ಸ್ತುತಿ ಶ್ಲೋಕಾ: ||
|| ಈ ರೀತಿಯಾಗಿ ಶ್ರೀ ಸುಬ್ರಹ್ಮಣ್ಯನ ಸ್ತುತಿ ಶ್ಲೋಕಗಳ ಭಾವಾರ್ಥವು ||
*********************************************************************************
- ೨ -
|| ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||
**********************
ಪ್ರಣಮ್ಯ ಶಿರಸಾ ದೇವಂ ಶಂಕರಂ ಲೋಕ ಶಂಕರಮ್ |
ಕೈಲಾಸವಾಸಿನಂ ಶಾಂತಂ ತಥಾ ಗೌರೀಂ ಸುಮಂಗಳಾಮ್ ||೧||
ಭಾವಾರ್ಥ:-ಶಾಂತನೂ,ಲೋಕಕ್ಕೆ ಸುಖವನ್ನುಂಟು ಮಾಡುವವನೂ,ಕೈಲಾಸವಾಸಿಯೂ ಆಗಿರುವ ದೇವನಿಗೂ, ಅದೇ ರೀತಿಯಾಗಿ ಸೌಭಾಗ್ಯದಾಯಿನಿಯಾದ ಗೌರಿಗೂ ತಲೆಬಾಗಿ ನಮಸ್ಕರಿಸುವೆ.
ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಪಠೇದಾರೋಗ್ಯಸಿದ್ದಯೇ |
ಧನಧಾನ್ಯಾದಿಸಿದ್ಧ್ಯರ್ಥಂ ದೃಢಕಾಯತ್ವಸಿದ್ಧಯೇ ||೨||
ಭಾವಾರ್ಥ:-ಧನ ಧಾನ್ಯಾದಿ ಸಿದ್ಧಿಗೋಸ್ಕರವಾಗಿಯೂ,ದೃಢ ಶರೀರಕ್ಕಾಗಿಯೂ,ಆರೋಗ್ಯ ಸಿದ್ಧಿಗಾಗಿಯೂ ಸುಬ್ರಹ್ಮಣ್ಯಾಷ್ಟಕ ಸ್ತೋತ್ರಗಳನ್ನು ಪಠಿಸಬೇಕು.
ಕಾರ್ತಿಕೇಯಂ ಮಹಾತ್ಮಾನಂ ಕುಮಾರಸ್ವಾಮಿನಂ ಪ್ರಭುಮ್ |
ಆಯುರಾರೋಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೩||
ಭಾವಾರ್ಥ:-ಕಾರ್ತಿಕೇಯನೂ,ಮಹಾತ್ಮನೂ,ಕುಮಾರಸ್ವಾಮಿಯೂ,ದೊರೆಯೂ,ಆಯುರಾರೋಗ್ಯವನ್ನು ಕರುಣಿಸುವವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಈಶಪುತ್ರಂ ಪ್ರೇಮಪುತ್ರಂ ಗೌರೀಪುತ್ರಂ ದಯಾನಿಧಿಮ್ |
ಜ್ಞಾನವೈರಾಗ್ಯಸಂಪನ್ನಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೪||
ಭಾವಾರ್ಥ:-ಶಿವ ತನಯನೂ ಗೌರೀ ಪುತ್ರನೂ,ಅವರೀರ್ವರ ಪ್ರೀತಿಯ ಮಗನೂ,ದಯಾನಿಧಿಯೂ,ಜ್ಞಾನ,ವೈರಾಗ್ಯಗಳಿಂದ ಕೂಡಿರುವಂತಹವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಸ್ಕಂದಂ ಷಾಣ್ಮಾತುರಂ ಪ್ರಾಜ್ಞಂ ಸರ್ವ ಶತ್ರುವಿಮರ್ದನಮ್ |
ಸಮರ್ಥಂ ಭಾಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೫||
ಭಾವಾರ್ಥ:-ಸ್ಕಂದನೂ,ಕಾರ್ತಿಕೇಯನೂ,ಕುಶಲಮತಿಯೂ, ಸರ್ವ ಶತ್ರುಗಳನ್ನು ಸಂಹರಿಸುವವನೂ, ಸಮರ್ಥನೂ ಭಾಗ್ಯವನ್ನು ಕರುಣಿಸುವವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಮಹಾಸೇನಂ ಮಹಾಪ್ರಾಜ್ಞಂ ಸರ್ವಜ್ಞಂ ಚ ಷಡಾನನಮ್ |
ಪಾರ್ವತೀನಂದನಂ ಕಾಂತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೬||
ಭಾವಾರ್ಥ:-ದೊಡ್ಡ ಪಡೆಯನ್ನು ಹೊಂದಿರುವವನೂ, ಮಹಾ ನಿಪುಣನೂ, ಎಲ್ಲವನ್ನೂ ಬಲ್ಲವನೂ,ಆರು ಮುಖಗಳನ್ನು ಹೊಂದಿರುವವನೂ,ಪಾರ್ವತೀ ತನಯನೂ,ಷಣ್ಮುಖ ಸ್ವಾಮಿಯೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಗುಹಂ ಧೀರಂ ತಥಾ ವೀರಂ ಹಸಂತಂ ಶಿಖಿವಾಹನಮ್ |
ಸತ್ಸಂತಾನ ಪ್ರದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೭||
ಭಾವಾರ್ಥ:-ಗುಹನೂ,ಧೀರನೂ, ಹಾಗೆಯೇ ವೀರನೂ,ಮಂದಸ್ಮಿತನೂ,ಸತ್ಸಂತಾನವನ್ನು ಕರುಣಿಸುವವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಶ್ರೀವಲ್ಲ್ಯಾ ಸಹಿತಂ ಶಾಂತಂ ದೇವಸೇನ್ಯಾ ಸುಸೇವಿತಂ |
ಪಿತೃಭಕ್ತಂ ಮಾತೃ ಭಕ್ತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೮||
ಭಾವಾರ್ಥ:-ಸಂಪತ್ಪ್ರದವಾಗಿರುವ ನೆಲ್ಲಿಕಾಯಿಯ ಸಹಿತವಾಗಿರುವ,ಶಾಂತನೂ,ದೇವಸೇನೆಯಯಿಂದ ಸೇವಿಸಲ್ಪಡುವವನೂ,ಪಿತೃ ಭಕ್ತನೂ,ಮಾತೃಭಕ್ತನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಸದ್ಗೃಹಸ್ತಂ ಚ ಸತ್ಪುತ್ರಂ ಸದಾಚಾರ್ಯಂ ಸದಾಶ್ರಯಮ್ |
ಸದಾ ಸದ್ಗುಣ ಸಂಪೂರ್ಣಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೯||
ಭಾವಾರ್ಥ:-ಉತ್ತಮ ಗೃಹಸ್ಥನೂ, ಉತ್ತಮ ಪುತ್ರನೂ,ಉತ್ತಮ ಆಚಾರವಂತನೂ,ಉತ್ತಮರಿಗೆ ಆಶ್ರಯದಾತನೂ,ಯಾವತ್ತೂ ಸದ್ಗುಣಗಳಿಂದ ಪರಿಪೂರ್ಣನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಬ್ರಹ್ಮಣ್ಯಂ ಬ್ರಹ್ಮಸಂಪನ್ನಂ ವೇದವೇದಾಂತಕೋವಿದಮ್ |
ವೇದವೇದಾಂತಸಂವೇದ್ಯಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೧೦||
ಭಾವಾರ್ಥ:-ಪುಣ್ಯರೂಪಿಯೂ,ತತ್ವ ಜ್ಞಾನಿಯೂ, ವೇದ ವೇದಾಂತಗಳನ್ನು ಬಲ್ಲವನೂ, ಅವುಗಳಿಂದ ತಿಳಿಯಲ್ಪಡುವಂತಹವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.
ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಯ: ಪಠೇತ್ ಸತತಂ ನರ: |
ಆಯುರಾರೋಗ್ಯದಂ ಪುಣ್ಯಂ ಸರ್ವಸೌಭಾಗ್ಯದಾಯಕಮ್ ||೧೧||
ಭಾವಾರ್ಥ:-ಈ ಸುಬ್ರಹ್ಮಣ್ಯಾಷ್ಟಕಗಳನ್ನು ಸತತವಾಗಿ ಯಾವ ಮನುಷ್ಯನು ಓದುವನೋ ಅವನು ಆಯುರಾರೋಗ್ಯಗಳಿಂದ ಕೂಡಿ ಪುಣ್ಯಶಾಲಿಯಾಗಿ ಸರ್ವ ಸೌಭಾಗ್ಯವನ್ನೂ ಹೊಂದುವನು.
ಸರ್ವಾನ್ ಕಾಮಾನವಾಪ್ನೋತಿ ವಿದ್ಯಾಂ ಬುದ್ಧಿಂ ಯಶೋ ಧನಂ |
ನಿತ್ಯಾರೋಗ್ಯಂ ಚ ಲಭತೇ ಸುಬ್ರಹ್ಮಣ್ಯಪ್ರಸಾದತ: ||೧೨||
ಭಾವಾರ್ಥ:-ಸಮಸ್ತ ವಾಂಛಿತಾರ್ಥಗಳು ಲಭಿಸುವುದರೊಂದಿಗೆ ವಿದ್ಯೆ, ಬುದ್ಧಿ,ಯಶಸ್ಸು,ಧನ,ನಿತ್ಯಾರೋಗ್ಯಗಳು ಶ್ರೀ ಸುಬ್ರಹ್ಮಣ್ಯ ಪ್ರಸಾದದಿಂದ ಲಭಿಸುತ್ತವೆ
++++++++++++++++++++++++++++++++++++++++++++++++++++++++++++++++++++++++ || ಇತಿ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮ ವಿರಚಿತ ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||
|| ಈ ರೀತಿಯಾಗಿ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮರಿಂದ ರಚಿಸಲ್ಪಟ್ಟ ಶ್ರೀ ಸುಬ್ರಹ್ಮಣ್ಯಾಷ್ಟಕಂಗಳ ಭಾವಾರ್ಥವು ||
*********************************************************************************
No comments:
Post a Comment